• UdhyamLearningFoundation

ನಾವು ನಮ್ಮ ಕಂಫರ್ಟ್ ಜೋನ್ ನಿಂದ ಹೊರ ಬಂದಾಗ ಏನು ಬೇಕಾದರೂ ಸಾಧಿಸಬಹುದು, ಎಷ್ಟು ಬೇಕಾದರೂ ಹಣ ಸಂಪಾದಿಸಬಹುದು!


CMS ಗೌಡ, ಗುಬ್ಬಿ ಶಿಕ್ಷ ಪ್ರೋಗ್ರಾಮ್ ಕೋರಿಡ್ನಾಟೋರ್.

ಉಧ್ಯಮ್ ಸಂಸ್ಥೆಯು ಮಕ್ಕಳು ಮತ್ತು ಯುವಜನರಲ್ಲಿ ಉಧ್ಯಮಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಅಗತ್ಯ ಮನಸ್ಥಿತಿಯನ್ನು ತನ್ನ ಉಧ್ಯಮ್ ಶಿಕ್ಷಾ ಕಾರ್ಯಕ್ರಮ ಮೂಲಕ ರೂಪಿಸುತ್ತಿದೆ.

ಪ್ರಸ್ತುತ ಈ ಕಾರ್ಯಕ್ರಮ ತುಮಕೂರು ಜಿಲ್ಲೆಯ ಆಯ್ದ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿದೆ, ಇದರಲ್ಲಿ ಗುಬ್ಬಿ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೂಡ ಒಂದು. ಈ ಕಾಲೇಜಿನ 1000ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು M.com ಓದುತ್ತಿರುವ ಆಯ್ದ 28 ಜನ ಈ ಕಾರ್ಯಕ್ರಮದ ಫಲಾನುಭವಿಗಳು.

ಇಲ್ಲಿ ಕಾರ್ಯಕ್ರಮ ಶುರುವಾಗಿ ಒಂದು ವಾರ ಕಳೆದಿದೆ. ನಾನು ನಿಮ್ಮೊಂದಿಗೆ ಒಂದು ಆಸಕ್ತಿಕರ ಸಂಗತಿ ಹಂಚಿಕೊಳ್ಳಲು ತುಂಬಾ ಉತ್ಸಾಕನಾಗಿದ್ದೇನೆ.

ಜನಾರ್ಧನ್ ಜೆ.ಎಸ್. ಇಲ್ಲಿನ ಕಾರ್ಯಕ್ರಮ ನಿರೂಪಕರು. ಅವರು ಉಧ್ಯಮ್ ಶಿಕ್ಷಾ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ಒಂದು ಟಾಸ್ಕ್ ನೀಡಿದ್ದರು. 

ಟಾಸ್ಕ್ ಏನೆಂದರೆ ವಿದ್ಯಾರ್ಥಿಗಳೆಲ್ಲರೂ ಸಣ್ಣ ಸಣ್ಣ ಗುಂಪುಗಳಾಗಿ ಭಾಗವಾಗಿ ಒಂದು ಗಂಟೆ ಸಮಯದಲ್ಲಿ ವ್ಯವಹಾರ ಮಾಡಿ ಹಣ ಸಂಪಾದನೆ ಮಾಡಿಕೊಂಡು ಬರಬೇಕು. ಇದಕ್ಕೆ ಮೂರು ಆಯ್ಕೆಗಳು ಸಹ ಈಗಿದ್ದವು. 1.100ರೂ ಬಂಡವಾಳ ಹೂಡಿ ಕಚ್ಚಾ ಪದಾರ್ಥಗಳನ್ನು ತಂದು ಸಿದ್ದ ಪದಾರ್ಥವನ್ನು ತಯಾರಿಸಿ ಮಾರಾಟ ಮಾಡಬೇಕು 2. ನಮ್ಮಲ್ಲಿರುವ ಕೌಶಲ್ಯವನ್ನು ಬೇರೊಬ್ಬ ವ್ಯಕ್ತಿಗೆ ಕಲಿಸಿ ಅದರಿಂದ ಹಣ ಸಂಪಾದಿಸುವುದು 3. ಎಲ್ಲಿಯಾದರೂ ಯಾವುದಾದರೂ ಒಂದು ಕೆಲಸ ಹುಡುಕಿಕೊಂಡು ಅದರ ಮೂಲಕ ಹಣ ಸಂಪಾದಿಸುವುದು.

ಈ ರೀತಿ ಟಾಸ್ಕ್ ನೀಡಿದ ನಂತರ ವಿದ್ಯಾರ್ಥಿಗಳೆಲ್ಲರೂ ಚಿಕ್ಕ ಗುಂಪುಗಳಾಗಿ ವಿಭಜಿಸಲ್ಪಟ್ಟರು. ಅದರಲ್ಲಿ ಒಂದು ಗುಂಪು 100ರೂ ಬಂಡವಾಳ ಹೂಡಿಕೆ ಮಾಡಿ ವ್ಯಾಪಾರ ಮಾಡಲು ನಿರ್ಧರಿಸಿತು. ಇದು 6 ಜನರ ಗುಂಪಾಗಿತ್ತು. ಎಲ್ಲರೂ ಚರ್ಚೆ ಮಾಡಿದರು. ಇರುವ ಒಂದು ಗಂಟೆ ಸಮಯದಲ್ಲಿ ಈಗ ಸದ್ಯಕ್ಕೆ 100 ಬಂಡವಾಳ ಏನು ತಯಾರಿಸಬಹುದು ? ಅದೇ ಸಮಯದಲ್ಲಿ ತಯಾರಿಸಿದ ಪದಾರ್ಥವನ್ನು ಹೇಗೆ ಮಾರಾಟ ಮಾಡುವುದು ಎಂದು ಆಲೋಚಿಸಿ ಒಂದು ನಿರ್ಧಾರಕ್ಕೆ ಬಂದರು. 

ಅದೇನೆಂದರೆ ಈಗ ಬೇಸಿಗೆ ಕಾಲ ಬಿಸಿಲು ಜಾಸ್ತಿ, ಜನರು ಹೆಚ್ಚು ನೀರನ್ನು ಬಯಸುವ ಕಾಲವಿದು ಹಾಗಾಗಿ ಜ್ಯೂಸ್ ರೆಡಿ ಮಾಡಿ ಮಾರಿದರೇ ಹೇಗೆ ? ಮತ್ತು ಜ್ಯೂಸ್ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದುಕೊಂಡಿದ್ದೆ ತಡ ಎಲ್ಲರೂ ಈ ಕಾರ್ಯಕ್ಕೆ ಸೈನಿಕರಂತೆ ಕಾರ್ಯನಿರ್ವಹಿಸಿದರು.

ಎಲ್ಲರೂ ತಮ್ಮ ತಮ್ಮ ನೀರಿನ ಬಾಟಲ್ ಬಳಸಿ ಕಾಲೇಜಿನಲ್ಲಿ ಇದ್ದ ವಾಟರ್ ಫಿಲ್ಟರ್ ಅಲ್ಲಿ ನೀರು ತುಂಬಿಸಿಕೊಂಡು ಹೊರ ಬಂದವರು, ಒಬ್ಬಬ್ಬರು ಒಂದೊಂದು ಕಡೆ ಹೋಗಿ ಪಾತ್ರೆ, ಐಸ್, ಟಬ್, ಸಕ್ಕರೆ, ನಿಂಬೆಹಣ್ಣು, ಲೋಟ ಹೀಗೆ ಜ್ಯೂಸ್ ಬೇಕಾದ ಎಲ್ಲಾ ಸಾಮಗ್ರಿಗಳನ್ನು 10 ನಿಮಿಷದಲ್ಲಿ ಒಂದು ಕಡೆ ಸೇರಿಸಿ ನಿಂಬೆಹಣ್ಣಿನ ಜ್ಯೂಸ್ (ಶರಬತ್ತು) ತಯಾರಿಸಿಯೇ ಬಿಟ್ಟರು.

ಇಲ್ಲಿಂದ ಇವರ ಮುಂದಿನ ಗುರಿ ಸಿದ್ದಗೊಂಡಿರುವ ನಿಂಬೆಹಣ್ಣಿನ ಶರಬತ್ತನ್ನು ಮಾರಾಟ ಮಾಡುವುದಾಗಿತ್ತು. ಸಮಯ ತುಂಬಾ ಕಡಿಮೆ ಇದ್ದಿದ್ದರಿಂದ ಎಲ್ಲರೂ ವೇಗವಾಗಿ ನಡೆಯುತ್ತಾ ಜನಸಂದಣಿ ಇರುವ ಕಡೆ ಸಾಗಿದರು.

ಒಂದು ವಿಷಯ ನೆನಪಿರಲಿ. ನಿಂಬೆಹಣ್ಣಿನ ಶರಬತ್ತು ಮಾಡಿ ಮಾರಲು ಹೊರಟ ಈ ಗುಂಪಿನ ಯಾವ ಒಬ್ಬ ಸದಸ್ಯರು ಕೂಡ ಬೀದಿಯಲ್ಲಿ ವ್ಯಾಪಾರ ಮಾಡಿದ ಅನುಭವ ಇಲ್ಲದವರು ಹಾಗೂ ಈಗ ಗುಬ್ಬಿಯ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ ಕಾಂ ಪದವಿಧರರು.

ಇವರಿಗೆ ಶರಬತ್ತು ಮಾರಾಟ ಮಾಡುವಾಗ ಮೊದಲಿಗೆ ಸ್ವಲ್ಪ ಕಷ್ಟವಾಯಿತು. ಜನರ ಜೊತೆ ಹೇಗೆ ಮಾತನಾಡಬೇಕು? ಹೇಗೆ ವ್ಯವಹರಿಸಬೇಕು? ಎಂಬುದು ಗೊತ್ತಾಗಲಿಲ್ಲ.  ಒಬ್ಬಿಬ್ಬರನ್ನು ಮಾತನಾಡಿಸಿ ಶರಬತ್ತು ಮಾರುತ್ತಾ ಹೋದಂತೆ ಅವರ ಕಾನ್ಫಿಡೆನ್ಸ್ ಲೆವೆಲ್ ಹೆಚ್ಚುತ್ತಾ ಹೋಯಿತು. ಇತ್ತ ಹಣ ಗಳಿಕೆಯು ಆಗತೊಡಗಿತು.

ಜನರಿಂದ ಜನರಿಗೆ ಶರಬತ್ತಿನ ಬೆಲೆಯನ್ನು ಕೂಡ ಏರಿಸು ತೊಡಗಿದರು. ಯಾರಿಗೆ ಎಷ್ಟು ಬೆಲೆ ಹೇಳಿದರೆ ಕೊಡುತ್ತಾರೆ ಎಂಬುದನ್ನು ಅತಿ ಬೇಗ ಅರಿತರು. ಹೀಗಾಗಿ 100 ರೂ ಬಂಡವಾಳ ಹೂಡಿದ ಇವರು 410 ಆದಾಯವನ್ನು ಗಳಿಸಿದರು. ಇನ್ನು ಸ್ವಲ್ಪ ಸಮಯ ಹೆಚ್ಚು ಕೊಟ್ಟಿದ್ದರೆ ಸಾವಿರ ಸಂಪಾದಿಸುತ್ತಿದ್ದರೋ ಏನೋ. 

ಸುಡುಬಿಸಿಲಿನಲ್ಲಿ ಬೀದಿ ಬೀದಿ ಅಲೆದು ಶರಬತ್ತು ಮಾಡಿದರೂ ಸಹ ಅವರ ಮುಖದಲ್ಲಿ ಸ್ವಲ್ಪವೂ ಉತ್ಸಾಹ ಕುಂದಿರಲಿಲ್ಲ. ಅವರು ಗಳಿಸಿದ ಸಂಪಾದನೆ ಮತ್ತು ಜನರಿಂದ ಸಿಕ್ಕ ಪ್ರತಿಕ್ರಿಯೆ ಅವರ ವಿಶ್ವಾಸ ಮತ್ತು ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ನಿಂಬೆಹಣ್ಣಿನ ಶರಬತ್ತು ಮಾರಾಟ ಮಾಡಿದ ನಂತರ ಉಳಿದ ಪೇಪರ್ ಲೋಟಗಳನ್ನು ಸಹ ಇವರು ಮಾರಾಟ ಮಾಡಿದ್ದು ವಿಶೇಷ ಸಂಗತಿ. ಇದಕ್ಕಾಗಿ ಸುಮಾರು ನಾಲ್ಕೈದು ಅಂಗಡಿಗಳಿಗೆ ಸುತ್ತಿ ಉಳಿದ ಪೇಪರ್ ಲೋಟಗಳನ್ನು ತೆಗೆದುಕೊಳ್ಳುತ್ತೀರಾ ಎಂದು ಕೇಳಿ ಕೊನೆಗೆ ಒಬ್ಬ ಬೀದಿ ಬದಿಯ ವ್ಯಾಪಾರಿಗೆ 30 ರೂಗಳಿಗೆ ಲೋಟಗಳನ್ನು  ಮಾರಿ ಹಣವನ್ನು ಆದಾಯಕ್ಕೆ ಸೇರಿಸಿದರು.

ಹೀಗೆ ನಮ್ಮ ವಾಣಿಜ್ಯ ವಿಭಾಗದ ಲೆಕ್ಕ ಶಾಸ್ತ್ರದ ವಿದ್ಯಾರ್ಥಿಗಳು ಒಂದು ಗಂಟೆ ಅವಧಿಯಲ್ಲಿ ನಿಂಬೆಹಣ್ಣಿನ ಶರಬತ್ತು ತಯಾರಿಸಿ ಸಂಪೂರ್ಣವಾಗಿ ಮಾರಾಟ ಮಾಡಿದೆ ಬಂದರು. ಕೇವಲ ಮಾರಾಟ ನಡೆಸಿ ಬಂದಿದ್ದರೆ ಏನು ವಿಶೇಷ ಎನಿಸುತ್ತಿರಲಿಲ್ಲ, ಮೊದಲ ಪ್ರಯತ್ನದಲ್ಲೇ ದುಪ್ಪಟ್ಟು ಲಾಭದೊಂದಿಗೆ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ್ದರು. ತಾವು ಮಾಡಿದ ಕೆಲಸದ ಬಗ್ಗೆ ಅವರುಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರೆ ಖುಷಿ, ಉತ್ಸಾಹ, ಪ್ರೇರಣೆ ಹಾಗೂ ಆಶ್ಚರ್ಯ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತಿದ್ದವು. ನನಗಂತು ವೈಯಕ್ತಿಕವಾಗಿ ಅವರ ಅನುಭವ Great ಎನಿಸಿತು.

ಅವರೆಲ್ಲರೂ ಈ ಚಟುವಟಿಕೆ ಮೂಲಕ ಒಂದನ್ನಂತು ಕಲಿತಿದ್ದರು. ಸರಿದಾರಿಯಲ್ಲಿ ಹಣ ಸಂಪಾದಿಸಬೇಕು ಎಂದರೆ  ಅದಕ್ಕೆ ನೂರಾರು ಮಾರ್ಗಗಳಿವೆ. ನಾವು ನಮ್ಮ ಕಂಫರ್ಟ್ ಜೋನ್ ನಿಂದ ಹೊರ ಬಂದಾಗ ಏನು ಬೇಕಾದರೂ ಸಾಧಿಸಬಹುದು, ಎಷ್ಟು ಬೇಕಾದರೂ ಹಣ ಸಂಪಾದಿಸಬಹುದು ಎಂದು ಅವರ ಮಾತುಗಳಲ್ಲಿ ನಮಗೆ ಅರ್ಥವಾಯಿತು.

ಈ ಟಾಸ್ಕ್ ನಿಂದ ಉದ್ಯಮ ಶಿಕ್ಷ ಕಾರ್ಯಕ್ರಮವು ಇದೇ ಫಲಿತಾಂಶವನ್ನು ನಿರೀಕ್ಷೆ ಮಾಡುತ್ತಿತ್ತು. ಇವರು ನಮ್ಮ ನಿರೀಕ್ಷಿತ ಗುರಿಯನ್ನು ತಲುಪಿದರು ಎಂಬುದು ಖುಷಿಯ ಸಂಗತಿ.


- CMS ಗೌಡ, ಗುಬ್ಬಿ. 

79 views0 comments